ಚಿಕ್ಕಮಗಳೂರು: ಮಿಂಚಿನ ಕಾರ್ಯಾಚರಣೆ ನಡೆಸಿ ೪೩ ಎಕರೆ ಅರಣ್ಯ ಒತ್ತುವರಿ ಭೂಮಿಯನ್ನು ತೆರವು ಮಾಡುವ ಮೂಲಕ ಅಧಿಕಾರಿಗಳು ಇದೇ ಮೊದಲ ಭಾರಿಗೆ ದಿಟ್ಟ ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆಯ ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಮುತ್ತೋಡಿ ವಲಯದ ಕೆಸವಿನ ಮನೆ ಸರ್ವೇ ನಂಬರ್ ೪೩ರಲ್ಲಿ ನಗರದ ನರೇಂದ್ರ ಪೈ ಎಂಬುವರಿಗೆ ಸೇರಿದ ಕೆಸವಿನಮನೆ ಹಕ್ಲು ತೋಟದಲ್ಲಿ ಅಭಯಾರಣ್ಯಕ್ಕೆ ಸೇರಿದ ೪೩ ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿತ್ತು. ಈ ಸಂಬಂಧ ೨೦೨೨-೨೩ನೇ ಸಾಲಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅನ್ವಯ ಪ್ರಕರಣವು ಕೂಡ ದಾಖಲಾಗಿತ್ತು.
ನ್ಯಾಯಾಲಯದ ಆದೇಶ:
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ ಅವರ ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅರಣ್ಯ ಒತ್ತುವರಿ ಅಂಶ ಸಾಬೀತಾದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಮಾಡಿಕೊಡುವಂತೆ ಒತ್ತುವರಿದಾರರಿಗೆ ಏಪ್ರಿಲ್ ಒಂದು ತಿಂಗಳು ಕಾಲಾವಕಾಶ ನೀಡಿ ಆದೇಶ ಮಾಡಲಾಗಿತ್ತು.
ಸದರಿ ಒತ್ತುವರಿದಾರರು ಯಾವುದೇ ಅರಣ್ಯ ಒತ್ತುವರಿ ತೆರವು ಮಾಡಿಕೊಡದ ಹಿನ್ನೆಲೆಯಲ್ಲಿ, ಇಲಾಖಾ ಮುಖ್ಯಸ್ಥರ ಸಮ್ಮುಖದಲ್ಲಿ ಕಳೆದ ೩ ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಬೆಳೆದಿದ್ದ ಕಾಫಿ ತೆಗೆದು ಭದ್ರಾ ಅಭಯಾರಣ್ಯ ಹುಲಿ ಮೀಸಲು ಇಲಾಖಾ ವ್ಯಾಪ್ತಿಗೆ ಸದರಿ ೪೩ ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.
ಒತ್ತುವರಿ ತೆರವಿಗೆ ಒತ್ತಾಯ:
ಹಲವು ವ?ಗಳಿಂದ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಅರಣ್ಯ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಅದರಲ್ಲೂ ಪ್ರತಿಷ್ಠಿತ ವ್ಯಕ್ತಿಗಳೇ ಅರಣ್ಯ ಒತ್ತುವರಿಗೆ ಮುಂದಾಗಿದ್ದರು. ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಗೆ ಒಳಪಟಿದ್ದು, ಇಲ್ಲಿ ಯಾವುದೇ ರೀತಿಯಲ್ಲೂ ಒತ್ತುವರಿಗೆ ಅವಕಾಶ ಇರುವುದಿಲ್ಲ.
ಅರಣ್ಯ ಸಚಿವರ ಆದೇಶ ಪಾಲನೆ:
ಇತ್ತೀಚೆಗೆ ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಅರಣ್ಯ ಒತ್ತುವರಿ ತೆರವುಮಾಡಿ ಅರಣ್ಯ ವನ್ಯಜೀವಿ ನೆಲೆಗಳನ್ನು ರಕ್ಷಿಸಬೇಕೆಂದು ಆದೇಶ ಮಾಡಿದ್ದರು. ಸದ್ಯ ಯಾವುದೇ ಮುಲಾಜು ಇಲ್ಲದೆ ಎ? ಒತ್ತಡ ಬಂದರೂ ಅಧಿಕಾರಿಗಳು ಒತ್ತುವರಿ ತೆರವು ಮಾಡಿದ್ದಾರೆ. ತ್ವರಿತವಾಗಿ ಒತ್ತುವರಿ ಪ್ರಕರಣವನ್ನು ಇಲಾಖೆ ಕೈಗೆತ್ತಿಕೊಂಡಿದೆ. ಈ ಕ್ರಮವನ್ನು ಪರಿಸರಾಸಕ್ತರು ಸ್ವಾಗತಿಸಿದ್ದಾರೆ.
ಈ ಕಾರ್ಯಾಚರಣೆಯನ್ನು ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಸ್ಪಾಲ್ ಕ್ಷೀರಸಾಗರ ಮಾರ್ಗದರ್ಶನದಲ್ಲಿ ಭದ್ರಾ ಹುಲಿ ಮೀಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ ನೇತೃತ್ವದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಜಗದೀಶ್ ಮೇದ, ಗೌರವ್, ಸುಧಾಕರ ಸೇರಿದಂತೆ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Clearance of 43 acres of forest encroachment land