ಚಿಕ್ಕಮಗಳೂರು: ಉತ್ತಮವಾದ ಫೋಟೋಗಳು ಜೀವನದ ನೆನಪು ಮೂಡಿಸಲು ಸಹಕಾರಿಯಾಗಲಿದ್ದು, ಛಾಯಾಗ್ರಾಹಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಹತ್ವ ಬರುತ್ತದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ ಅಮಟೆ ತಿಳಿಸಿದರು.
ಅವರು ಇಂದು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಛಾಯಾಗ್ರಾಹಕರ ಸಂಘ ಏರ್ಪಡಿಸಿದ್ದ ವಿಶ್ವ ಫೋಟೋಗ್ರಫಿ ದಿನಾಚರಣೆಯನ್ನು ಫೋಟೋ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಉತ್ತಮವಾದ ಪ್ರವಾಸಿ ತಾಣಗಳಿದ್ದು, ಇದಕ್ಕೆ ಪೂರಕವಾಗಿ ಅಷ್ಟೇ ಪ್ರತಿಭಾನ್ವಿತರಾದ ಛಾಯಾಗ್ರಾಹಕರು ಇದ್ದಾರೆ. ಜಗತ್ತಿನಲ್ಲಿ ನಡೆಯುವ ವಾಸ್ತವಿಕತೆಯನ್ನು ಫೋಟೋ ಮೂಲಕ ತೋರಿಸುವುದರಿಂದ ಪತ್ರಿಕೆಗಳಲ್ಲಿ ಮುದ್ರಣಗೊಂಡು ಆಕರ್ಷಕವಾಗಿರುತ್ತದೆ ಎಂದು ಅಭಿಪ್ರಾಯಿಸಿದರು.
ಫೋಟೋಗ್ರಫಿ ಇದ್ದಾಗ ಛಾಯಾಗ್ರಾಹಕರು ಇರಬೇಕು, ಈ ನಿಟ್ಟಿನಲ್ಲಿ ಛಾಯಾಗ್ರಾಹಣ ಉಳಿದಿದೆ. ಇದನ್ನು ಎಕ್ಸ್‌ಪೋ ಮಾಡದಿದ್ದರೆ ಏನೋ ಕಳೆದುಕೊಂಡಂತೆ ಎಂಬ ಭಾವನೆ ಮೂಡುತ್ತದೆ. ಎಲ್ಲರೂ ಫೋಟೋ ಗ್ಯಾಲರಿ ಮಾಡಲು ಬೇಕಾದ ಸಲಹೆ ಸಹಕಾರವನ್ನು ಇಲಾಖೆಯಿಂದ ನೀಡುವುದಾಗಿ ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಾಗೂ ಉತ್ತಮ ಫೋಟೋ ಗ್ಯಾಲರಿಗೆ ಪೊಲೀಸ್ ಭವನದಲ್ಲಿ ಅವಕಾಶ ಮಾಡಿಕೊಡುವುದಾಗಿ ವಿಶ್ವಾಸ ವ್ಯಕ್ತಿಪಡಿಸಿದ ಅವರು, ಇದರಿಂದ ಸಾರ್ವಜನಿಕರಲ್ಲಿ ಫೋಟೋಗ್ರಫಿ ಬಗ್ಗೆ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದರು. ಉತ್ತಮ ಫೋಟೋಗಳ ಪ್ರದರ್ಶನದಿಂದ ಛಾಯಾಗ್ರಾಹಕರ ಪ್ರತಿಭೆ ಬೆಳೆಯುವುದರ ಜೊತೆಗೆ ಸಾರ್ವಜನಿಕರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಸಂಘವು ಬೆಳೆಯಲು ಪೂರಕವಾಗುತ್ತದೆ ಎಂದು ಹೇಳಿದರು.
ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸಾರ್ವಜನಿಕರಲ್ಲಿ ಫೋಟೋ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ, ಇನ್ನಷ್ಟು ಛಾಯಾಗ್ರಾಹಕ ಪ್ರತಿಭೆಗಳು ಬೆಳೆಯಲಿ ಎಂದು ಶುಭ ಹಾರೈಸಿದರು.
ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಛಾಯಾಗ್ರಾಹಕರು ಒಗ್ಗಟ್ಟಿನಿಂದ ಸೇವೆ ಸಲ್ಲಿಸಿದಾಗ ಸಾರ್ವಜನಿಕರಿಗೆ ಬಹಳ ಉಪಯೋಗವಾಗುತ್ತದೆ. ಜೊತೆಗೆ ಫೋಟೋಗಳಿಂದ ಮನಃಪರಿವರ್ತನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ನಗರಸಭೆ ಮೂಲಕ ರಾಜೀವ್‌ಗಾಂಧಿ ವಸತಿ ನಿಗಮದಿಂದ ಖಾಲಿ ನಿವೇಶನ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಲು ಅವಕಾಶವಿದ್ದು, ನುರಿತ ಬಡ ಛಾಯಾಗ್ರಾಹಕರಿದ್ದರೆ ಅಂತಹ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಬಗ್ಗೆ ಛಾಯಾಗ್ರಾಹಕರು ತಮ್ಮ ಫೋಟೋಗಳ ಮೂಲಕ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಜಯಚಂದ್ರ ಮಾತನಾಡಿ, ವಿಶೇಷತೆಯೊಂದಿಗೆ ಅತ್ಯಾಧುನಿಕ ಛಾಯಾಗ್ರಾಹಣ ಇಂದು ಎಲ್ಲರಲ್ಲಿ ವಿಶ್ವಾಸ ಮೂಡಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಕಾರ್ಯಕ್ರಮ ನಡೆಯಬೇಕಾದರೆ ಅದರ ಕೇಂದ್ರಬಿಂದು ಛಾಯಾಗ್ರಾಹಕನಾಗಿರುತ್ತಾನೆ ಎಂದರು.
ಛಾಯಾಗ್ರಾಹಕ ವೃತ್ತಿ ನೂರಾರು ವರ್ಷಗಳ ಇತಿಹಾಸವಿದ್ದು, ಆದರೆ, ಇಂದು ಸಾಮಾಜಿಕ ಭದ್ರತೆ ಛಾಯಾಗ್ರಾಹಕರಿಗೆ ಸಿಗುತ್ತಿಲ್ಲ ಎಂದು ವಿಷಾಧ ವ್ಯಕ್ತಿಪಡಿಸಿ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಂಘಟಿತರಾಗಿ ಹೋರಾಡಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಸಂಘದ ಎಲ್ಲಾ ಸದಸ್ಯರುಗಳಿಗೆ ಗುರುತಿನ ಚೀಟಿಯನ್ನು ನೀಡಲಾಯಿತು ಕಾರ್ಯಕ್ರಮದಲ್ಲಿ ಛಾಯೆಶ್ರೀ ಪ್ರಶಸ್ತಿಗೆ ಭಾಜನರಾದ ಸತೀಶ್ ಗವನಹಳ್ಳಿ ಮತ್ತು ಯತೀಶ್ ಕೇತುಮಾರನಹಳ್ಳಿ ಇವರನ್ನು ಗೌರವಿಸಿ ಸನ್ಮಾನಿಸಿಲಾಯಿತು. ವೇದಿಕೆಯಲ್ಲಿ ಕಾರ್ಮಿಕ ಅಧಿಕಾರಿ ಬಿ.ಸಿ. ಸುರೇಶ್, ತಾಲ್ಲೂಕು ಅಧ್ಯಕ್ಷ ಸುನಿಲ್ ಕುಮಾರ್, ಛಾಯಾಗ್ರಾಹಕರಾದ ಎ.ಎನ್. ಮೂರ್ತಿ, ರಮೇಶ್, ಜಗದೀಶ್, ವಿನಯ್, ರಘು, ಶಿವು, ಖಜಾಂಚಿ ರುದ್ರೇಶ್, ಉಪಾಧ್ಯಕ್ಷ ಚೇತನ್ ಉಪಸ್ಥಿತರಿದ್ದರು.
ಛಾಯಾಗ್ರಾಹಕ ಹಾಗೂ ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಸಂಪಾದಕ ಕೆ.ಎಸ್. ಕಿಶೋರ್ ಕುಮಾರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
Photos that remind us of life are helpful.